ಅಸೋಸಿಯೇಟೆಡ್ ಪ್ರೆಸ್ ಆಫ್ ಅಮೆರಿಕ
 
ವಾರ್ತೆಗಳನ್ನು ಸಂಗ್ರಹಿಸಿ ಪತ್ರಿಕೆಗಳಿಗೂ ಇತರ ಸಮೂಹದ ಸಂಪರ್ಕ ವ್ಯವಸ್ಥೆಗಳಿಗೂ ಹಂಚುವ ಪ್ರಪಂಚದ ಸಹಕಾರಿ ವಾರ್ತಾ ಸಂಸ್ಥೆಗಳಲ್ಲಿ ಅತ್ಯಂತ ದೊಡ್ಡದು. ಅಮೆರಿಕದ ಅನೇಕ ವಾರ್ತಾವಿತರಣ ಸಂಸ್ಥೆಗಳ ಸಡಿಲ ಒಕ್ಕೂಟದಲ್ಲಿ ಒಂದಾಗಿದ್ದ ವೆಸ್ಟರ್ನ್ ಅಸೋಸಿಯೇಟೆಡ್ ಪ್ರೆಸ್ ಸುದ್ದಿಗಳ ಹಂಚಿಕೆ ಕೇವಲ ನ್ಯೂಯಾರ್ಕ್‍ನ ಪತ್ರಿಕೆಗಳಿಗೆ ಪರಿಮಿತವಾಗಿದೆಯೆಂಬ ಭಾವನೆಯಿಂದ ಹೊರಬಂದು, 1892ರಲ್ಲಿ ಅಸೋಸಿಯೇಟೆಡ್ ಪ್ರೆಸ್ ಎಂಬ ಹೆಸರಿನಿಂದ ಕೆಲಸಮಾಡತೊಡಗಿತು. ಪ್ರಾರಂಭದಲ್ಲಿ ಯೂರೋಪಿನ ಮತ್ತು ಕಾಮನ್‍ವೆಲ್ತನ ಸುದ್ದಿಗಳಿಗಾಗಿ ರಾಯಿಟರ್ಸ್ ಹಾಗೂ ಇತರ ಸುದ್ದಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. 1934ರಲ್ಲಿ ವಿದೇಶ ವಾರ್ತೆಗಳಿಗೆ ಸ್ವಂತವಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಆರಂಭಿಸಿತು. ಅಮೆರಿಕದಿಂದ ಯೂರೋಪಿಗೆ ತಂತಿ ಸಂಪರ್ಕಗಳನ್ನು ಗುತ್ತಿಗೆಗೆ ಪಡೆಯಿತು. ಈಗ ಪ್ರಪಂಚದ ಎಲ್ಲ ಮುಖ್ಯ ಸ್ಥಳಗಳಲ್ಲೂ ಈ ಸಂಸ್ಥೆಯ ಅಂಗ ಕಚೇರಿಗಳಿವೆ, ಇಲ್ಲವೆ ಪ್ರತಿನಿಧಿಗಳಿದ್ದಾರೆ; ಟೆಲಿಪ್ರಿಂಟರುಗಳ ವ್ಯವಸ್ಥೆಯಿದೆ. 1935ರಲ್ಲಿ ಟೆಲಿಗ್ರಾಫ್ ತಂತಿಗಳ ಮೂಲಕ ವಿದ್ಯುತ್ ಪ್ರೇರಣೆಗಳಿಂದ ಛಾಯಾಚಿತ್ರಗಳನ್ನು ಪ್ರಕ್ಷೇಪಿಸುವ ಕಾರ್ಯ ಆರಂಭವಾಯಿತು. ಸಂಸ್ಥೆಯ ಪ್ರಚಲಿತ ಅಯವ್ಯಯ ವರ್ಷಕ್ಕೆ 33,000,000 ಡಾಲರುಗಳಿಗೂ ಹೆಚ್ಚು. ಸುಮಾರು 7,000 ಪತ್ರಿಕೆಗಳು ಈ ಸಂಸ್ಥೆಯ ಸುದ್ದಿಗಳಿಗೂ ಸುಮಾರು 5,000 ಪತ್ರಿಕೆಗಳು ಛಾಯಾಚಿತ್ರಗಳಿಗೂ ಚಂದಾದಾರರಾಗಿವೆ. 						          
 (ಕೆ.ಎಸ್.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ